0 Shares

ಬೆಂಗಳೂರು : “ಬೇರನ್ನು ಮರೆತರೆ ಮರ ಬಾಳುವುದಿಲ್ಲ. ಅದೇ ರೀತಿ ನಿಮ್ಮ ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಅದೇ ರೀತಿ ಗುರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಯಶಸ್ಸು ಖಂಡಿತ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಕೆ.ಜೆ. ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.

“ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ‌ ಸುಖ ದೊರೆಯುತ್ತದೆ. ನೀವೆಲ್ಲರೂ ಈ ದೇಶಕ್ಕೆ, ರಾಜ್ಯಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯಬೇಕು”. “ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗ ಪ್ಯಾರಿಸ್ ಗೆ ತೆರಳಿದ್ದೆ. ಆ ದಿನ ನನ್ನ ಹುಟ್ಟುಹಬ್ಬ ಎಂದು ಹೇಗೋ ಅಲ್ಲಿದ್ದವರಿಗೆ ತಿಳಿದು ಹೋಯಿತು ಎಂದರು.

ಆಗ ನನ್ನನ್ನು ವೇದಿಕೆ ಮೇಲೆ ಕರೆದರು. ನಾನು ಹಳ್ಳಿಗಾಡಿನಿಂದ ಬಂದ ವ್ಯಕ್ತಿ.‌ ಹುಟ್ಟುಹಬ್ಬ ಆಚರಿಸುವ ಸಂಸ್ಕೃತಿ ನಮ್ಮ ಕಡೆ ಇರಲಿಲ್ಲ. ಆದರೂ ಕೇಕ್ ತಂದು ಅದರ‌ ಮೇಲೆ ಮೇಣದಬತ್ತಿಯಿಟ್ಟು ಹಚ್ಚಿದ ನಂತರ ಅದನ್ನು ನಂದಿಸುವಂತೆ ತಿಳಿಸಿದರು. ಆಗ ಆ ಕೊಠಡಿಯ ಒಂದು ಭಾಗದಲ್ಲಿದ್ದ ವ್ಯಕ್ತಿಯೋರ್ವ ಓಡಿಬಂದು ಹಚ್ಚಿದ ಮೇಣದ ಬತ್ತಿಯನ್ನು ಅವರು ಆರಿಸುವುದಿಲ್ಲ. ಏಕೆಂದರೆ ಅವರು ಬಂದಿರುವುದು ಭಾರತದಿಂದ. ಅವರದ್ದು ದೀಪ ಬೆಳಗಿಸುವ ಸಂಸ್ಕೃತಿಯೇ ಹೊರತು ದೀಪ ಆರಿಸುವ ಸಂಸ್ಕೃತಿಯಲ್ಲ” ಎಂದರು.

“ಮಕ್ಕಳು ಮುಂದಿನ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಮೇಣದಬತ್ತಿಯನ್ನು ಆರಿಸದೇ ಹಚ್ಚಬೇಕು. ನಿಮ್ಮ ಗುರಿ ಹೊಸ ವಿಚಾರಗಳನ್ನು ಕಲಿಯುವ ಕಡೆ ಇರಬೇಕು. ಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ನೀವು ಕಲಿಯುವ ವಿದ್ಯೆಯನ್ನು ಬೇರೆ ಯಾರೂ ಕಸಿಯಲು ಸಾಧ್ಯವಿಲ್ಲ”. “ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನಸಂಪದಂ. ಜ್ಞಾನಶಕ್ತಿ ಸ್ವರೂಪಸ್ಯ, ದೀಪಜ್ಯೋತಿ ಪ್ರಕಾಶಿತಂ. ಈ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ, ಜನರು ಆರೋಗ್ಯವಂತರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

“ಈ ಶಾಲೆಯ 50 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ನನಗೆ ಅತ್ಯಂತ ಸಂತೋಷವಾಗಿದೆ. ನಾನೂ ಸಹ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು ಅಲ್ಲಿಗೆ ಭೇಟಿ ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ಈ ವಿದ್ಯಾಸಂಸ್ಥೆ ಜನಸಾಮಾನ್ಯರ ಸಂಸ್ಥೆಯಾಗಿ ಬೆಳೆದಿದೆ. ಇದಕ್ಕೆ ನನ್ನ ಪ್ರೀತಿ, ಬದ್ಧತೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಒತ್ತಾಸೆಯಾಗಿ ನಿಲ್ಲಬೇಕಾಗಿದೆ. ಆದ ಕಾರಣಕ್ಕೆ ನಾನು ಕಾರ್ಯಕ್ರಮಕ್ಕೆ ಬಂದು ಬೆಂಬಲವಾಗಿ ನಿಂತಿದ್ದೇನೆ. ವಿಜಯ್ ಕುಮಾರ್ ಅವರ ತಂದೆ ಇದನ್ನು ಪ್ರಾರಂಭ ಮಾಡಿ ಬಡ ಮಕ್ಕಳ ಪರವಾಗಿ ಕೆಲಸ ಮಾಡಿದ್ದರು” ಎಂದು ಹೇಳಿದರು.

0 Shares

By admin

Leave a Reply

Your email address will not be published. Required fields are marked *