0 Shares

ತುಮಕೂರು : ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ಗೋವನ್ನು 2ನೇ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಶ್ರೀ ವಿದ್ಯಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದೆ.

ತುಮಕೂರಿನ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾನಂದ ಸ್ವಾಮೀಜಿ ಅವರು, ಮಠದ ಭಕ್ತರೊಂದಿಗೆ ಸೇರಿ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, “ದೇಶದಲ್ಲಿ ಹುಲಿ, ಆನೆ, ಜಿಂಕೆ ಸೇರಿದಂತೆ ಎಲ್ಲ ಪ್ರಾಣಿಗಳಿಗೆ ಗೌರವ ಇದೆ. ಆದರೆ ದೇಶವನ್ನು ಕಾಪಾಡುವ, ಕೃಷಿ ಹಾಗೂ ಆರ್ಥಿಕತೆಯ ಆಧಾರವಾದ ಗೋವಿಗೆ ಬೇಕಾದಷ್ಟು ಗೌರವ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಇದ್ದರೂ ಸಹ ದೇಶದಲ್ಲಿ ಗೋಹತ್ಯೆ ನಿಂತಿಲ್ಲ ಎಂದು ಆಕ್ಷೇಪಿಸಿದ ಅವರು, “ಕಾಯ್ದೆ ಇದ್ದರೂ ಅದರ ಸಮರ್ಪಕ ಜಾರಿ ಇಲ್ಲ. ಇದರಿಂದ ಗೋಸಂರಕ್ಷಣೆಗೆ ಧಕ್ಕೆಯಾಗುತ್ತಿದೆ” ಎಂದು ಹೇಳಿದರು.

“ಗೋವಿನ ಹಾಲು ಕುಡಿದಿರುವ ಪ್ರತಿಯೊಬ್ಬರೂ ಈ ಅಭಿಯಾನದ ಭಾಗವಾಗಬೇಕು. ಪ್ರತಿಯೊಬ್ಬ ವಿದ್ಯಾವಂತರು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ಪತ್ರ ಬರೆದು ಮನವಿ ಮಾಡಬೇಕು” ಎಂದು ಸ್ವಾಮೀಜಿ ಕರೆ ನೀಡಿದರು.

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿದರೆ ದೇಶದ ದಾರಿದ್ರ್ಯ ತೊಲಗಲು ಸಹಕಾರಿಯಾಗುತ್ತದೆ, ಕೃಷಿ, ಗ್ರಾಮೀಣ ಆರ್ಥಿಕತೆ ಮತ್ತು ಸಂಸ್ಕೃತಿ ಮತ್ತಷ್ಟು ಬಲಪಡುತ್ತದೆ ಎಂದು ಶ್ರೀ ವಿದ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಈ ಅಭಿಯಾನಕ್ಕೆ ಮಠದ ಭಕ್ತರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶವ್ಯಾಪಿ ಮಟ್ಟದಲ್ಲಿ ಅಭಿಯಾನ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

0 Shares

By admin

Leave a Reply

Your email address will not be published. Required fields are marked *