ಬೆಂಗಳೂರು : ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಬಾಕಿ ಇರುವ ವೇತನ ಹಿಂಬಾಕಿ ಹಾಗೂ ನೂತನ ವೇತನ ಪರಿಷ್ಕರಣೆ ಜಾರಿಗೆ ಒತ್ತಾಯಿಸಿ ನಾಳೆ (ಫೆ.19) ಸಾರಿಗೆ ನೌಕರರು ಶಾಂತಿಯುತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ‘ಬೆಂಗಳೂರು ಚಲೋ’ ಹೋರಾಟ ನಡೆಯಲಿದೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಾಗಿ, 01.01.2020 ರಿಂದ 28.02.2023ರ ವರೆಗಿನ 38 ತಿಂಗಳ ವೇತನ ಹಿಂಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ 01.01.2024ರಿಂದ ಜಾರಿಯಾಗಬೇಕಿದ್ದ ನೂತನ ವೇತನ ಪರಿಷ್ಕರಣೆ ಇನ್ನೂ ಜಾರಿಯಾಗಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ. 2026ರ ಜನವರಿ ಬಂದರೂ ವೇತನ ಪರಿಷ್ಕರಣೆ ಆಗದಿರುವುದು ಸರ್ಕಾರದ ನಿರ್ಲಕ್ಷ್ಯವೆಂದು ನೌಕರರು ಆರೋಪಿಸಿದ್ದಾರೆ.
ಈ ಎರಡು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ ನಡೆಯುವ ಬೆಂಗಳೂರು ಚಲೋ ಹೋರಾಟದ ಅಂಗವಾಗಿ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ಈ ಪ್ರತಿಭಟನೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿದೆ. ಈ ಹೋರಾಟದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ,ಕೆಕೆಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಬೀದಿಗಿಳಿಯಲಿದ್ದಾರೆ.
ನಾಳೆ ಸಂಜೆಯೊಳಗೆ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಫೆ.20ರಂದು ಸಂಪೂರ್ಣ ಸಾರಿಗೆ ಬಂದ್ (ಕಂಪ್ಲೀಟ್ ಸ್ಟ್ರೈಕ್) ಮಾಡುವ ಸಾಧ್ಯತೆ ಇದೆ ಎಂದು ಸಾರಿಗೆ ನೌಕರರ ಸಂಘಗಳು ಎಚ್ಚರಿಕೆ ನೀಡಿವೆ. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
