0 Shares

ಬೆಂಗಳೂರು : ಗುತ್ತಿಗೆದಾರರ ಬಾಕಿ ಹಣದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಈ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಲೋಕಾಯುಕ್ತ ಹೈಯರ್ ಅಥಾರಿಟಿ ಗಮನಕ್ಕೆ ತರಬೇಕು. ಬಾಕಿ ಉಳಿಯಲು ಕಾರಣವೇನು ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಹಣ ಬಿಡುಗಡೆ ಮಾಡಿರುವುದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸದನದಲ್ಲಿಯೇ ಮುಖ್ಯಮಂತ್ರಿ ಹಾಗೂ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಿಂದಿನ ಸರ್ಕಾರವೇ ಈ ಸಮಸ್ಯೆಗೆ ಕಾರಣ. ಪರ್ಸೆಂಟೇಜ್ ವಿಚಾರದ ಬಗ್ಗೆ ನಮಗೆ ಮಾಹಿತಿ ಇಲ್ಲ. ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಲು ಬಂದಿಲ್ಲ. ನಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳಿಗೆ ನಾವು ಹಣ ನೀಡುತ್ತಿದ್ದೇವೆ ಎಂದು ಜಾರಕಿಹೊಳಿ ಹೇಳಿದರು.

ಬಾಕಿ ಹಣದ ವಿವರ – ನಮ್ಮ ಇಲಾಖೆಯಲ್ಲಿ ಒಟ್ಟು 12 ಸಾವಿರ ಕೋಟಿ ರೂಪಾಯಿ ಬಾಕಿ ಇತ್ತು. ಇದರಲ್ಲಿ 3 ಸಾವಿರ ಕೋಟಿ ರೂಪಾಯಿ ಪಾವತಿಸಲಾಗಿದೆ. ಇನ್ನೂ 9 ಸಾವಿರ ಕೋಟಿ ಬಾಕಿ ಉಳಿದಿದ್ದು, ಅದನ್ನು ಬ್ಯಾಲೆನ್ಸ್ ಮಾಡುತ್ತೇವೆ ಎಂದು ಹೇಳಿದರು. ನಾವು ಅಪ್ರೂವ್ ಕೊಟ್ಟಿಲ್ಲ ಎಂಬ ವಿಚಾರವೂ ಚರ್ಚೆಗೆ ಬಂದಿದೆ. ನಾವು ಕೊಡುವ ಮೊತ್ತದಲ್ಲೇ ಬ್ಯಾಲೆನ್ಸ್ ಮಾಡಿ ಎಂಬ ಮಾತುಕತೆ ನಡೆದಿದೆ. ಇದರಲ್ಲಿ ಅಧಿಕಾರಿಗಳ ಲೋಪ ಎನ್ನಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕರ ವಿದೇಶಿ ಪ್ರವಾಸ ವಿಚಾರ – ಶಾಸಕರ ಫಾರಿನ್ ಟೂರ್ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪ್ರತಿವರ್ಷವೂ ಕೆಲವರು ವಿದೇಶಕ್ಕೆ ಹೋಗುತ್ತಾರೆ. ಅವರ ಸ್ವಂತ ಹಣದಿಂದಲೇ ಹೋಗುತ್ತಾರೆ. ಅವರನ್ನು ನಿಯಂತ್ರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅನಾವಶ್ಯಕ ಗೊಂದಲ ತಪ್ಪಿಸಲು ಹೋಗಬೇಡಿ ಎಂದು ಹೈಕಮಾಂಡ್ ಹೇಳಿರಬಹುದು. ಅಧಿಕಾರ ಹಸ್ತಾಂತರ ವಿಚಾರ ಕಾಲ ಬಂದಾಗ ನೋಡೋಣ. ನಾವು ಕೂಡ ನಿಮ್ಮಂತೆಯೇ ಕಾಯುತ್ತಿದ್ದೇವೆ ಎಂದು ಹೇಳಿದರು.

ಪಕ್ಷ ಮತ್ತು ಹೈಕಮಾಂಡ್ ಕುರಿತು – ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ನಮ್ಮ ಹೈಕಮಾಂಡ್ ಗಟ್ಟಿ ಇದೆ. ಯಾರೂ ಅದನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಹೈಕಮಾಂಡ್ ಸ್ಪಷ್ಟಪಡಿಸಬೇಕೆಂಬ ಬೇಡಿಕೆಯೂ ಇದೆ ಎಂದು ಹೇಳಿದರು.

ಪಕ್ಷದಲ್ಲಿ ತಂಡಗಳು ಇದ್ದೇ ಇರುತ್ತವೆ. ಸೀನಿಯರ್ಸ್ ಮೊದಲಿನಿಂದಲೂ ವಿದೇಶಕ್ಕೆ ಹೋಗುತ್ತಿದ್ದಾರೆ. ಕೆಲವರು ದುಬೈಗೆ, ಕೆಲವರು ಯೂರೋಪ್‌ಗೆ ಹೋಗಿದ್ದಾರೆ. ಪಕ್ಷದಲ್ಲಿ ಟೀಂ ಮಾಡೋಕೆ ಆಗಲ್ಲ. ಇಬ್ಬರೂ ಒಂದೇ ತಂಡದಲ್ಲಿದ್ದಾರೆ, ಸಮರ್ಥರಿದ್ದಾರೆ ಎಂದು ಹೇಳಿದರು.

ಕಮಿಷನ್ ವಿಚಾರ – ಹಿಂದೆಯೂ ಕಮಿಷನ್ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ಸಂಪೂರ್ಣವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ. ಈ ಕಡೆಯವರು ಆ ಕಡೆ ಆರೋಪ ಮಾಡುತ್ತಾರೆ, ಆ ಕಡೆಯವರು ಈ ಕಡೆ ಆರೋಪ ಮಾಡುತ್ತಾರೆ. ಕಮಿಷನ್ ಅನ್ನು ನಿಯಂತ್ರಣ ಮಾಡಬೇಕು ಅಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

0 Shares

By admin

Leave a Reply

Your email address will not be published. Required fields are marked *