ಬೆಳಗಾವಿ : ಅಕ್ಕಪಡೆ ಮಹಿಳೆಯರ ಶಕ್ತಿ ಹಾಗೂ ಸ್ವಾಭಿಮಾನದ ಪ್ರತೀಕವಾಗಿದ್ದು, ಶೀಘ್ರವೇ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಅಕ್ಕಪಡೆಗೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ ಪ್ರಾಯೋಗಿಕವಾಗಿ ಕೆಲವೆಡೆ ಆರಂಭಿಸಿರುವ ಅಕ್ಕಪಡೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಅಂಗೀಕಾರ ಪಡೆದು ತಾಲೂಕು ಮಟ್ಟಕ್ಕೂ ವಿಸ್ತರಣೆ ಮಾಡಲಾಗುವುದು ಎಂದರು.
ಅಕ್ಕಪಡೆ ಮಹಿಳೆಯರು ಹಾಗೂ ಮಕ್ಕಳಿಗೆ ಭರವಸೆಯಾಗಿದೆ. ಮಹಿಳೆಯರು, ಮಕ್ಕಳು ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಅದರ ಮುಂದುವರಿದ ಭಾಗವೇ ಅಕ್ಕಪಡೆ ಎಂದು ಸಚಿವೆ ತಿಳಿಸಿದರು.
ಮಾಲ್, ಜಾತ್ರಾ ಮಹೋತ್ಸವ, ಮಹಿಳಾ ಹಾಸ್ಟೆಲ್‌ಗಳು, ಕಾಲೇಜುಗಳು, ಸಮುದಾಯ ಭವನ ಸೇರಿದಂತೆ ಜನನಿಬೀಡ ಪ್ರದೇಶಗಳಲ್ಲಿ ಅಕ್ಕಪಡೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ನಾಗರಿಕ ಸಮಾಜದ ಬೆಂಬಲವೂ ಅಗತ್ಯ ಎಂದು ಅವರು ಮನವಿ ಮಾಡಿದರು.
ಬಾಲ್ಯವಿವಾಹ ತಡೆ, ಬಾಲ ಗರ್ಭಿಣಿ ಪ್ರಕರಣಗಳು ಹಾಗೂ ಪೋಕ್ಸೋ ಪ್ರಕರಣಗಳನ್ನು ಬೇರು ಮಟ್ಟದಲ್ಲೇ ಕಿತ್ತುಹಾಕುವುದು ಅಕ್ಕಪಡೆಯ ಉದ್ದೇಶ. ಮಹಿಳೆಯರು ನಿರ್ಭೀತಿಯಿಂದ ಬದುಕಬೇಕು ಎಂಬ ಆಶಯದೊಂದಿಗೆ ಅಕ್ಕಪಡೆ ರಚಿಸಲಾಗಿದೆ ಎಂದರು.
ದೌರ್ಜನ್ಯಕ್ಕೆ ಒಳಗಾದವರ ಹೆಸರನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ 24 ಗಂಟೆಗಳ ಸಹಾಯವಾಣಿಗಳನ್ನು ತೆರೆಯಲಾಗಿದೆ. 1098 (ಮಕ್ಕಳ ಸಹಾಯವಾಣಿ), 181 (ಮಹಿಳಾ ಸಹಾಯವಾಣಿ) ಹಾಗೂ ಪೊಲೀಸ್ ಇಲಾಖೆ 112 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ – ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು. ಈ ವಿಚಾರದಲ್ಲಿ ಅನಗತ್ಯ ಚರ್ಚೆ ನಡೆಸುವುದು ಸರಿಯಲ್ಲ ಎಂದರು.
ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಹಿರೇ ಬಾಗೇವಾಡಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಬೆಳಗಾವಿ ಗ್ರಾಮೀಣ ತಾಲೂಕು ರಚನೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
