ಬೆಂಗಳೂರು : ಜಿಬಿಎ ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿರುವುದನ್ನು ಸ್ವಾಗತಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಯಾವುದೇ ಲೋಪದೋಷಗಳು ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ವೇಳೆ ಸಾಕಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಎಲ್‌ಒಗಳ ಸಮ್ಮುಖದಲ್ಲೇ ಮತದಾರರ ಪರಿಷ್ಕರಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಪ್ರತ್ಯೇಕವಾಗಿ ಮತದಾರರ ಪರಿಷ್ಕರಣೆ ನಡೆಸಲು ಅಧಿಕಾರ ಹೊಂದಿದ್ದು, ಎಸ್‌ಐಆರ್ ಹಾಗೂ ಆಯೋಗದ ಪರಿಷ್ಕರಣೆ ನಡುವೆ ಕ್ಲಾಶ್ ಆಗುತ್ತದೆಯೇ ಎನ್ನುವುದು ನನಗೆ ತಿಳಿದಿಲ್ಲ. ಯಾರು ಮತದಾನಕ್ಕೆ ಅರ್ಹರಿದ್ದಾರೆ ಅವರಿಗೆ ಮತದಾನ ಮಾಡುವ ಅವಕಾಶ ಸಿಗಬೇಕು ಅನ್ನೋದೇ ನಮ್ಮ ಮನವಿ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ನಾಯಕತ್ವ ವಿಚಾರದಲ್ಲಿ ‘ಬಾಲ ನಾಯಿಯನ್ನು ಅಲ್ಲಾಡಿಸಬಾರದು’ ಎಂಬ ಎಚ್.ಸಿ. ಮಹದೇವಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನಾನು ಮಹದೇವಪ್ಪನಿಗಾಗಲಿ, ಯಾರಿಗೂ ಉತ್ತರ ಕೊಡಲು ತಯಾರಿಲ್ಲ” ಎಂದರು. ನಾಯಕತ್ವದ ಕುರಿತು ನಾನು, ಸಿದ್ದರಾಮಯ್ಯ ಹಾಗೂ ನಮ್ಮ ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನವಿದೆ. ಆ ತೀರ್ಮಾನ ಏನು ಅನ್ನೋದು ಸಮಯ ಬಂದಾಗ ಉತ್ತರ ಸಿಗುತ್ತೆ ಎಂದರು. ಕದ್ದುಮುಚ್ಚಿ ಯಾವುದೇ ಗುಟ್ಟಿನ ವ್ಯವಹಾರ ಇಲ್ಲ, ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನತೆಗೆ ಸಂದೇಶ ನೀಡುತ್ತಾರೆ ಎಂದು ಹೇಳಿದರು.
ಶಾಸಕರ ವಿದೇಶ ಪ್ರವಾಸ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿಕೆಶಿ,“ಯಾವ ಟೂರ್ ಬಗ್ಗೆನೂ ನನಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಯಾರಾದರೂ ಕಳುಹಿಸುತ್ತಿರಬಹುದು, ಯಾರಾದರೂ ಸ್ಪಾನ್ಸರ್ ಮಾಡುತ್ತಿರಬಹುದು. ಕಳುಹಿಸುವವರೂ ಇರುತ್ತಾರೆ, ಹೋಗುವವರೂ ಇರುತ್ತಾರೆ” ಎಂದು ಹೇಳಿದರು. ಪಕ್ಷದ ಅಧ್ಯಕ್ಷನಾಗಿ ನನಗೆ ಈ ಕುರಿತು ಮಾಹಿತಿ ಇಲ್ಲ, ನಾನು ಇದರಲ್ಲಿ ಇಂಟರ್‌ಫಿಯರ್ ಮಾಡುವುದಕ್ಕೆ ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.
