ಚಿಕ್ಕಮಗಳೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಸಿಟಿ ರವಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಲ್ಲು ತೂರಾಟ ನಡೆದ ವೇಳೆ 112ಕ್ಕೆ ದೂರು ನೀಡಲಾಗಿತ್ತು, ರೆಡ್ ಹ್ಯಾಂಡ್ ಆಗಿ ಹಿಡಿದವರು 16–17 ವರ್ಷದ ಅಪ್ರಾಪ್ತರು ಎಂದು ಸಿಟಿ ರವಿ ಹೇಳಿದ್ದಾರೆ. ಅವರ ಪರವಾಗಿ ಕೆಲವರು ಪೊಲೀಸ್ ಠಾಣೆಗೆ ಬಂದು ಸಮರ್ಥನೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದು ಕ್ಷೇತ್ರದ ಜನರು ಆತಂಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು,
ಯಾವ ಉದ್ದೇಶಕ್ಕೆ ಒಂದೇ ಮನೆಗೆ ಕಲ್ಲು ತೂರಾಟ ಮಾಡಲಾಗಿದೆ? ಇದಕ್ಕೆ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ “RSS ರಿಜಿಸ್ಟರ್ ಮಾಡಿಸುತ್ತೇನೆ” ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಅವರಿಗೆ RSS ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ ಎಂದು ಕಿಡಿಕಾರಿದ್ದಾರೆ. ಮಾರ್ಕ್ಸ್ ವಾದದ ಚಿಂತನೆಗಳು ಅವರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು, ಜಾತಿಭೇದವಿಲ್ಲದ ಸಂಘ ಎಂದು ಶ್ಲಾಘಿಸಿದ್ದರು ಎಂದಿದ್ದಾರೆ. ಅಂಬೇಡ್ಕರ್, ರತನ್ ಟಾಟಾ ಸೇರಿದಂತೆ ಹಲವರು ಸಂಘವನ್ನು ಶ್ಲಾಘಿಸಿದ್ದಾರೆ, ಪ್ರಣಬ್ ಮುಖರ್ಜಿ ಅವರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಸ್ಮರಿಸಿದ್ದಾರೆ.
RSS ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದೆ, ಸರ್ಕಾರದ ಅನುದಾನಕ್ಕೆ ಕೈಚಾಚಿಲ್ಲ, ಸ್ವಾವಲಂಬನೆ, ರಾಷ್ಟ್ರಭಕ್ತಿ, ಸೇವೆಯೇ ಅದರ ಧ್ಯೇಯ ಎಂದು ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ. ಹಿಂದೂಗಳು ಒಟ್ಟಾದರೆ ಜಾತಿ ರಾಜಕೀಯ ಮಾಡುವವರಿಗೆ ಭಯ ಶುರುವಾಗುತ್ತದೆಯೇ? ರಾಷ್ಟ್ರಭಕ್ತಿಯನ್ನು ನೀವು ವಿರೋಧಿಸುತ್ತಿದ್ದೀರಾ? ಎಂದು ಪ್ರಿಯಾಂಕ್ ಖರ್ಗೆಗೆ ಪ್ರಶ್ನೆ ಎಸೆದಿದ್ದಾರೆ.
