0 Shares

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ 2ನೇ ಆರೋಪಿ (A2) ನಟ ದರ್ಶನ್ ತೂಗುದೀಪ್ ಜೈಲು ಪಾಲಾಗಿದ್ದು, ಅಲ್ಲಿಂದ ಹೊರ ಬರಲು ಪರದಾಡುತ್ತಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ದಿನದಂದೇ ದರ್ಶನ್ ಪರ ವಕೀಲರು ಕೋರ್ಟ್‌ಗೆ ಮಹತ್ವದ ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ 57ನೇ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಪರ ವಕೀಲರು ಸಿಆರ್‌ಪಿಸಿ ಸೆಕ್ಷನ್ 309ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ (ವಿಚಾರಣೆ) ಪ್ರಕ್ರಿಯೆಯನ್ನು ವಿಳಂಬ ಮಾಡದೆ, ‘ಡೇ ಟು ಡೇ’ ಅಂದರೆ ಪ್ರತಿದಿನವೂ ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿದೆ.

2025ರ ಆಗಸ್ಟ್ 14 ರಂದು ಜಾಮೀನು ರದ್ದುಗೊಂಡ ಬಳಿಕ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಏಳು ಆರೋಪಿಗಳು ಜೈಲು ಸೇರಿದ್ದರು. ಇದೀಗ ದರ್ಶನ್ ಜೈಲು ಸೇರಿ ಭರ್ತಿ ಆರು ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಅವರ ಕಾನೂನು ತಂಡ ಹೊಸ ತಂತ್ರ ರೂಪಿಸಿದೆ.

ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆದು, ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದರೆ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಲು ದಾರಿ ಸುಗಮವಾಗುತ್ತದೆ ಎಂಬುದು ದರ್ಶನ್ ಲೆಕ್ಕಾಚಾರ. ಹೀಗಾಗಿಯೇ ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

ಸೋಮವಾರ ದರ್ಶನ್ ಹುಟ್ಟುಹಬ್ಬದಂದೇ ಈ ಅರ್ಜಿ ಸಲ್ಲಿಕೆಯಾಗಿದ್ದು, ಇದಕ್ಕೆ ಪ್ರಬಲ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ (ಪೊಲೀಸ್ ಪರ ವಕೀಲರು) ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಕೋರ್ಟ್‌ನಲ್ಲಿ ಟ್ರಯಲ್ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಈ ಅರ್ಜಿ ವಿಚಾರಣೆ ನಿರ್ಣಾಯಕವಾಗಲಿದೆ. ಜೈಲಿನಲ್ಲಿ ಆರು ತಿಂಗಳು ಕಳೆದ ನಂತರ ನಟ ದರ್ಶನ್ ಬಿಡುಗಡೆಗಾಗಿ ಕಾನೂನು ಹೋರಾಟದ ವೇಗ ಹೆಚ್ಚಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *