ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್ ಅವರು ಬೆಳಗ್ಗೆಯೇ ತೆರೆಯಲಾಗಿದ್ದ ಬಾರ್‌ನ್ನು ಸ್ಥಳದಲ್ಲೇ ಮುಚ್ಚಿಸಿದ ಘಟನೆ ಪ್ರಕಾಶ್‌ನಗರದಲ್ಲಿ ನಡೆದಿದೆ.
ಶಾಸಕರು ಬೆಳಿಗ್ಗೆ ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ, ಬೆಳಿಗ್ಗೆ 7 ಗಂಟೆಯಲ್ಲೇ ಬಾರ್ ತೆರೆಯಲಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಬಾರ್ ಒಳಗೆ ತೆರಳಿ, “ಇಷ್ಟು ಬೆಳಿಗ್ಗೆ ಬಾರ್ ಓಪನ್ ಮಾಡಿದ್ದೇಕೆ?” ಎಂದು ಪ್ರಶ್ನಿಸಿದರು.
ಬಾರ್ ಪರವಾನಗಿಯನ್ನು ಪರಿಶೀಲಿಸಿದ ಅವರು, ನಿಗದಿತ ಸಮಯಕ್ಕೂ ಮುನ್ನ ಅಂಗಡಿ ತೆರೆದಿರುವ ಕಾರಣವನ್ನು ಮಾಲೀಕರಿಂದ ಕೇಳಿದರು. “ಇದೇನು ದಿನಸಿ ಅಂಗಡಿಯೇ? ಹೂವಿನ ವ್ಯಾಪಾರವೇ? ಹಣ್ಣಿನ ವ್ಯಾಪಾರವೇ? ಹಾಲು, ಹಣ್ಣು, ಹೂವು ಮಾರಾಟ ಮಾಡುವ ಸಮಯದಲ್ಲಿ ಎಣ್ಣೆ (ಮದ್ಯ) ವ್ಯಾಪಾರ ಸರಿಯೇ?” ಎಂದು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ನಂತರ, ಮದ್ಯ ಮಾರಾಟಕ್ಕೆ ನಿಗದಿತ ಸಮಯವಿದೆ ಎಂದು ಸೂಚಿಸಿ, ಪ್ರಕಾಶ್‌ನಗರದಲ್ಲಿ ತೆರೆಯಲಾಗಿದ್ದ ಪ್ರವೀಣ್ ಬಾರ್ ಅನ್ನು ತಕ್ಷಣವೇ ಮುಚ್ಚಿಸುವಂತೆ ಆದೇಶಿಸಿದರು. ಸಾರ್ವಜನಿಕ ಶಿಸ್ತು ಮತ್ತು ಕಾನೂನು ಪಾಲನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
