ಬೆಂಗಳೂರು : ಜೆಪಿ ನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಜನರೊಂದಿಗೆ ಜನತಾದಳ’ ಎರಡನೇ ಹಂತದ ಪ್ರವಾಸ ಆರಂಭವಾಗಲಿದೆ ಎಂದು ಘೋಷಿಸಿದರು.
ಮೈಸೂರಿನ ಪಿರಿಯಾಪಟ್ಟಣದಿಂದ ಎರಡನೇ ಹಂತದ ಪ್ರವಾಸ ಆರಂಭವಾಗಲಿದ್ದು, 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ತಿಂಗಳ ಕಾಲ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು. ಮೊದಲ ಹಂತದಲ್ಲಿ 52 ಕ್ಷೇತ್ರಗಳನ್ನು ಪೂರ್ಣಗೊಳಿಸಿ ಸುಮಾರು 9000 ಕಿಲೋಮೀಟರ್ ಸಂಚರಿಸಲಾಗಿದೆ ಎಂದು ವಿವರಿಸಿದರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕ, ಹಳೆ ಮೈಸೂರು ಸೇರಿ ಬಹುತೇಕ ಭಾಗಗಳಲ್ಲಿ ಪ್ರವಾಸ ಮುಗಿದಿದೆ ಎಂದರು.
ಬಹಿರಂಗ ಹೇಳಿಕೆಗಳಿಂದ ಮೈತ್ರಿಗೆ ಧಕ್ಕೆ ವಿಚಾರ – “ನಾಲ್ಕು ಗೋಡೆಗಳ ಒಳಗೆ ಚರ್ಚೆಯಾದ ವಿಷಯಗಳು ಅಲ್ಲಿಯೇ ಉಳಿಯಬೇಕು. ಬೀದಿಬದಿಯಲ್ಲಿ ಚರ್ಚಿಸಿದರೆ ಸಮಸ್ಯೆಗೆ ಪರಿಹಾರ ಸಿಗಲ್ಲ” ಎಂದು ನಿಖಿಲ್ ಹೇಳಿದರು.ಎನ್‌ಡಿಎ ಮೈತ್ರಿಗೆ ಪ್ರಧಾನಿ ಹಾಗೂ ಗೃಹ ಸಚಿವರು ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂತೋಷ್ ಜಿ ಅವರ ಮಾರ್ಗದರ್ಶನವೂ ಇದೆ ಎಂದು ಹೇಳಿದರು. ಒಂದೆರಡು ಜಿಲ್ಲೆಗಳಲ್ಲಿ ಕೆಲ ನಾಯಕರು ಮಾತನಾಡಿರುವುದರಿಂದ ಸಮಸ್ಯೆ ಉಂಟಾಗಿದೆ. ಈಗ ಚರ್ಚೆ ಮಾಡುವುದು ಸಲ್ಲದು, It is too early ಎಂದು ಸ್ಪಷ್ಟಪಡಿಸಿದರು.
ಕೆಲ ಕ್ಷೇತ್ರಗಳಲ್ಲಿ ಮೈತ್ರಿ ಮುರಿಯುವ ಹೇಳಿಕೆಗಳ ಬಗ್ಗೆ – “28 ಕ್ಷೇತ್ರಗಳಲ್ಲಿ ಜೆಡಿಎಸ್ ಉತ್ತಮ ಮತ ಪಡೆದಿದೆ. ಸೌದತ್ತಿಯಲ್ಲಿ 32 ಸಾವಿರ, ಶೃಂಗೇರಿಯಲ್ಲಿ 19 ಸಾವಿರ, ತಿಪಟೂರಿನಲ್ಲಿ 31 ಸಾವಿರ ಮತ ಪಡೆದಿದ್ದೇವೆ. ಕಡೂರು ಸೇರಿ ಹಲವು ಕ್ಷೇತ್ರಗಳ ಪಟ್ಟಿ ಕೊಡಬಹುದು. ಇವತ್ತು ಈ ವಿಚಾರ ಚರ್ಚೆ ಬೇಡ. ಭ್ರಷ್ಟ ಸರ್ಕಾರವನ್ನು ಕರ್ನಾಟಕದಿಂದ ತೊಲಗಿಸಲು ನಾವು ಒಳ್ಳೆ ಉದ್ದೇಶಕ್ಕಾಗಿ ಕೈಜೋಡಿಸಿದ್ದೇವೆ” ಎಂದರು.
ಮೈತ್ರಿಯಿಂದ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದ್ಯಾ? – “ಈ ಅಲಯನ್ಸ್ ಪರಸ್ಪರ ಪ್ರೀತಿ–ವಿಶ್ವಾಸದಿಂದ ಹುಟ್ಟಿಕೊಂಡದ್ದು. ಎಚ್.ಡಿ. ದೇವೇಗೌಡ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾಲ್ಕೈದು ಜನರ ಮಾತಿಗೆ ಮಣೆ ಹಾಕುವುದಿಲ್ಲ. ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಆಗುತ್ತದೆ” ಎಂದು ನಿಖಿಲ್ ಹೇಳಿದರು.
ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಕುರಿತು – “ಅವರು ಹಿರಿಯ ನಾಯಕರು. ಕೇವಲ ಬಿಜೆಪಿ ಅಥವಾ ಜೆಡಿಎಸ್ ಅಲ್ಲ, ಎನ್‌ಡಿಎ ಒಟ್ಟಾಗಿ 140–150 ಸೀಟು ಗೆಲ್ಲಲಿದೆ” ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತು – “ನಾವು ಮೈತ್ರಿ ಧರ್ಮವನ್ನು ಗೌರವದಿಂದ ಪಾಲಿಸುತ್ತಿದ್ದೇವೆ.
ಲೋಕಸಭೆಯಲ್ಲಿ ಗೆದ್ದಂತೆ ವಿಧಾನಸಭೆಯಲ್ಲೂ ಅಣ್ಣತಮ್ಮಂದಿರಂತೆ ಕೆಲಸ ಮಾಡಿ ಗೆಲ್ಲುತ್ತೇವೆ. ದಾಖಲೆ ಸೃಷ್ಟಿಸುವುದರಲ್ಲಿ ಸಂಶಯವೇ ಇಲ್ಲ” ಎಂದರು.
ಪ್ರಿಯಾಂಕ ಖರ್ಗೆ ಜೆಡಿಎಸ್ ಅನ್ನು ಕಡೆಗಣಿಸಿದ್ರಾ? – “25 ವರ್ಷ ತುಂಬಿದ ಪ್ರಾದೇಶಿಕ ಪಕ್ಷ ನಾವು. ಅನೇಕ ನಾಯಕರು ಇಲ್ಲಿ ರಾಜಕೀಯ ಬೆಳೆಸಿ ಬೇರೆ ಪಕ್ಷಗಳಿಗೆ ಹೋಗಿದ್ದಾರೆ.
ಪ್ರಿಯಾಂಕ ಖರ್ಗೆ ಅವರಿಗೆ ಜೆಡಿಎಸ್ ಶಕ್ತಿ ಗೊತ್ತಿದೆ. ಹೊರಗಡೆ ಮಾತನಾಡುವಾಗ ಈ ರೀತಿ ಹೇಳಿರಬಹುದು” ಎಂದು ಹೇಳಿದರು.
ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? – “ಯಾವುದೇ ಘೋಷಣೆ ಮಾಡಿಲ್ಲ. ನಾನು ಘೋಷಣೆ ಮಾಡೋಕೆ ಯಾರು? ಜನರ ವಿಶ್ವಾಸ ಉಳಿಸಿಕೊಂಡು ಹೋಗಿ ಅನ್ನೋದರಲ್ಲಿ ತಪ್ಪೇನಿದೆ?” ಎಂದು ಸ್ಪಷ್ಟನೆ ನೀಡಿದರು.
ZP–TP ಮೈತ್ರಿ ವಿಚಾರ – “ಇನ್ನೂ ಎರಡು ಪಕ್ಷಗಳ ಚೌಕಟ್ಟಿನಲ್ಲಿ ಚರ್ಚೆಗೆ ಬಂದಿಲ್ಲ.
ಮೊದಲು ಚುನಾವಣೆ ನಡೆಯುತ್ತದೋ ಇಲ್ಲವೋ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನ ಬಂದ ಮೇಲೆ ಚರ್ಚೆ ಆಗುತ್ತದೆ” ಎಂದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಕುರಿತು – “ವಿದೇಶ ಪ್ರವಾಸಕ್ಕಿಂತ ಜನ ಕೊಟ್ಟ ಸ್ಪಷ್ಟ ಮ್ಯಾಂಡೇಟ್‌ಗೆ ಗೌರವ ನೀಡಿ ಗ್ಯಾರಂಟಿಗಳನ್ನು ನಿಭಾಯಿಸಬೇಕು. ಗೃಹಲಕ್ಷ್ಮಿ ಹಣ 5 ತಿಂಗಳಿಂದ ಬಂದಿಲ್ಲ ಎನ್ನುವ ದೂರುಗಳಿವೆ. ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ, ಒಟ್ಟು 7.64 ಲಕ್ಷ ಕೋಟಿ ಸಾಲದ ಹೊಣೆ ಯಾರದ್ದು? ಪ್ರವಾಸ ಮುಖ್ಯವಾ, ಆಡಳಿತ ಮುಖ್ಯವಾ?” ಎಂದು ಪ್ರಶ್ನಿಸಿದರು.
ಜಿ.ಟಿ. ದೇವೇಗೌಡರ ರಾಜಕೀಯ ಮುಗಿದಿದೆಯಾ? – “ಅದು ನನಗೆ ಗೊತ್ತಿಲ್ಲ ಸರ್. ಯಾರದ್ದೂ ಮುಗಿದ ಅಧ್ಯಾಯ ಅಲ್ಲ. ನೋಡೋಣ” ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
