ಮೈಸೂರು : ಮೈಸೂರಿನ ಕೆಎಸ್‌ಐಸಿ ನಿಗಮದ ಕಾರ್ಖಾನೆಯ 6 ಎಕರೆ ಜಾಗದಲ್ಲಿ ಕ್ರೀಡಾಂಗಣ ರೂಪಿಸುವ ಯೋಜನೆಯನ್ನು ಹಿಂಪಡೆಯಬೇಕು. ಕಾರ್ಖಾನೆಯನ್ನು ಮುಚ್ಚಲು ನಾವು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ರೇಷ್ಮೆ ಕಾರ್ಖಾನೆಯನ್ನು ಉಳಿಸಿ ಎಂದು ನಾವು ಕರೆ ನೀಡುತ್ತಿದ್ದೇವೆ. ಈ ಸಂಸ್ಥೆಗೆ 112 ವರ್ಷಗಳ ಇತಿಹಾಸವಿದೆ. ಈ ಕಾರ್ಖಾನೆ ತಾಯಿ ಇದ್ದಂತೆ. ಕಾಂಗ್ರೆಸ್ ಸರ್ಕಾರ ತಾಯಿಯ ಕೆಚ್ಚಲನ್ನು ಕತ್ತರಿಸುವ ಕೆಲಸ ಮಾಡುತ್ತಿದೆ.
ಇಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ನೂಲು ತೆಗೆಯುವ ಕಾರ್ಖಾನೆ ಆರಂಭಿಸಿದ್ದಾರೆ. ಅದರ ಅನುಕೂಲಕ್ಕಾಗಿ ಸರ್ಕಾರಿ ಕಾರ್ಖಾನೆಯನ್ನು ಮುಚ್ಚುವ ಪ್ರಯತ್ನ ನಡೆದಿದೆ. ಚೀನಾದ ನೂಲು ಖರೀದಿಸಿದರೆ ಅಲ್ಲೂ ಕಮಿಶನ್ ದೊರೆಯುತ್ತದೆ. ಈ ಸಂಸ್ಥೆಯಲ್ಲಿ ಸುಮಾರು 2,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಇದು ಕಾರ್ಮಿಕರ ಬದುಕಿನ ಪ್ರಶ್ನೆ ಎಂದರು.
ಚನ್ನಪಟ್ಟಣದ ಕಾರ್ಖಾನೆಗೆ ಭೇಟಿ ನೀಡಿ ಕಾರ್ಮಿಕರ ಜೊತೆ ಚರ್ಚಿಸಿದಾಗ ಕ್ಯಾಂಟೀನ್ ಇಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ಕ್ಯಾಂಟೀನ್ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಕಾರ್ಮಿಕರಿಗೆ 15,000 ರೂ. ವೇತನ ಹಾಗೂ 3,000 ರೂ. ಸ್ಟೈಫಂಡ್ ದೊರೆಯುತ್ತದೆ. ಈ ಬಾರಿ 96 ಕೋಟಿ ರೂ. ಲಾಭವಾಗಿದ್ದರೂ ಕಾರ್ಮಿಕರ ವೇತನ ಹೆಚ್ಚಳ ಮಾಡಿಲ್ಲ. ಅಧಿಕಾರಿಗಳು ಫಾರಿನ್ ಟ್ರಿಪ್ ಮಾಡಲು ಒಂದೂವರೆ ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರ ಬದಲು ಸಂಬಳ ಹೆಚ್ಚಳ ಮಾಡಬಹುದಿತ್ತು. ಇಂತಹ ಸ್ಥಿತಿಯಲ್ಲಿ 6 ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ನೀಡಲಾಗಿದೆ ಎಂದರು.
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಇಂಗ್ಲೆಂಡ್‌ಗೆ ಹೋಗಿ ಅಲ್ಲಿ ರೇಷ್ಮೆ ಸೀರೆಗಳನ್ನು ನೋಡಿ, ಸ್ವಿಜರ್‌ಲ್ಯಾಂಡ್‌ನಿಂದ ಯಂತ್ರಗಳನ್ನು ತರಿಸಿ ಇಲ್ಲಿ ಉದ್ಯಮ ಆರಂಭಿಸಿದ್ದರು. ಕ್ರೀಡಾಂಗಣ ನಿರ್ಮಿಸಿದರೆ 430 ಮರಗಳನ್ನು ಕಡಿದುಹಾಕಬೇಕಾಗುತ್ತದೆ. ಕ್ರೀಡಾಂಗಣ ನಿರ್ಮಾಣವಾದರೂ, ಪಕ್ಕದಲ್ಲೇ ಬಾಯ್ಲರ್ ಇರುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿ ಚಟುವಟಿಕೆ ನಡೆಸಲು ಅನುಮತಿ ಸಿಗುವುದಿಲ್ಲ. ಈ ಭಾಗದಲ್ಲಿ ಶುದ್ಧ ನೀರು ಸಿಗುವುದರಿಂದ ಸೀರೆಯ ಗುಣಮಟ್ಟ ಹೆಚ್ಚಿದೆ. ಇಂತಹ ಸ್ಥಳದಲ್ಲೇ ಕ್ರೀಡಾಂಗಣ ಮಾಡಲು ನಿರ್ಧರಿಸಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲೂ ನಾನು ಭಾಗವಹಿಸಿದ್ದೆ. ಈ ಒತ್ತಡದಿಂದಾಗಿ ಸರ್ಕಾರ 56 ಸಾವಿರ ಹುದ್ದೆಗಳ ನೇಮಕಾತಿ ಮಾಡಲು ತೀರ್ಮಾನಿಸಿದೆ. ಸರ್ಕಾರದಲ್ಲಿ ಹಣವಿಲ್ಲದೆ ಈ ಭಾಗದಲ್ಲಿ ಉಪ್ಪಾರ ಭವನ, ಕನಕದಾಸ ಭವನ ನಿರ್ಮಾಣ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಹೊಸದಾಗಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದಾರೆ.
ಪಕ್ಕದಲ್ಲೇ 18 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಅಲ್ಲೇ ಕ್ರೀಡಾಂಗಣ ಮಾಡಬಹುದು. ಮೈಸೂರಿನಲ್ಲಿ ಲೇಔಟ್‌ಗಳನ್ನು ಮಾಡಲು ಭೂಮಿ ದೊರೆಯುತ್ತಿದೆ. ಕಾಂಗ್ರೆಸ್ ಕಚೇರಿ ನಿರ್ಮಿಸಲು ಜಾಗ ಸಿಗುತ್ತಿದೆ. ಆದರೆ ಕ್ರೀಡಾಂಗಣ ಮಾಡಲು ಸರ್ಕಾರಕ್ಕೆ ಜಾಗ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಲಾಭದ ಹಣವನ್ನು ನಿಗಮವನ್ನು ಅಭಿವೃದ್ಧಿ ಮಾಡಲು, ಕಾರ್ಮಿಕರ ಸೌಲಭ್ಯ ಹೆಚ್ಚಿಸಲು ಬಳಸಬೇಕು. ಅದನ್ನು ಬಿಟ್ಟು ವಿದ್ಯುತ್ ನಿಗಮದಲ್ಲಿ ಠೇವಣಿ ಮಾಡಿದ್ದಾರೆ. ಕಾರ್ಖಾನೆಯ ಒಂದು ಇಂಚು ಭೂಮಿ ಕೂಡ ಪರಭಾರೆಯಾಗಲು ಬಿಡುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿದ್ದರು. ಅವರು ಎಳೆದ ಸಾಮಾಜಿಕ ನ್ಯಾಯದ ರಥವನ್ನು ನಾವು ಮುಂದೆ ನಡೆಸುತ್ತೇವೆ.
ಆದರೆ ಕಾಂಗ್ರೆಸ್ ಇದನ್ನು ಹಿಂದಕ್ಕೆ ಎಳೆಯುತ್ತಿದೆ. ಕಾರ್ಮಿಕರು ಯಾವುದೇ ರೀತಿಯಲ್ಲಿ ಪ್ರತಿಭಟನೆ ಮಾಡಿದರೂ ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಸರ್ಕಾರ ಕಾಂಪೌಂಡ್ ನಿರ್ಮಿಸಿದರೆ, ಮುತ್ತಿಗೆ ಹಾಕುತ್ತೇವೆ. ಮಾರ್ಚ್ 6 ರೊಳಗೆ ಈ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ ಅಧಿವೇಶನದಲ್ಲಿ ಈ ಬಗ್ಗೆ ಮಾತಾಡುತ್ತೇನೆ ಎಂದರು.
