0 Shares

ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ದಿಡೀರನೆ ಉದ್ಭವವಾಗಿರುವ ಅನಿಲ ಸಿಲಿಂಡರ್ ಅಭಾವಕ್ಕೆ ಇಂದು ದೇಶದ ಜನಸಾಮಾನ್ಯ ಸಂಪೂರ್ಣ ತತ್ತರಿಸುತ್ತಿದ್ದಾನೆ. ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗಿ ಬೀದಿಗೆ ಬೀಳುವ ಪರಿಸ್ಥಿತಿಯನ್ನು ಸೃಷ್ಟಿಸಿರುವ ಬಿಜೆಪಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಆಮ್ ಆದ್ಮಿ ಪಕ್ಷ ಇಂದು ತೀವ್ರ ಪ್ರತಿಭಟನೆಯನ್ನು ನಡೆಸಿತು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಪ್ರಧಾನಿ ಮೋದಿ ಅವರ ಅಮೆರಿಕ ಗುಲಾಮಗಿರಿ ವಿದೇಶಾಂಗ ನೀತಿಯಿಂದಾಗಿ ದೇಶದ ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಹಿಂದೆ ಕೊರೋನಾ ಸಂದರ್ಭದಲ್ಲಿಯೂ ಸಹ ಇದೇ ರೀತಿಯ ಅವಾಂತರಕ್ಕೆ ತಳ್ಳಿದ್ದ ಬಿಜೆಪಿ ಕೇಂದ್ರ ಸರ್ಕಾರ ಪ್ರತಿ ದಿವಸ ತಪ್ಪು ತಪ್ಪು ಹೆಜ್ಜೆಗಳನ್ನು ಇಡುತ್ತಾ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ.

ವಿಶ್ವದಲ್ಲಿ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಹ ಭಾರತವು ತನ್ನ ಅಲಿಪ್ತ ಶೃಂಗ ವಿದೇಶಾಂಗ ನೀತಿಯನ್ನು ಮುಂದುವರಿಸಿತ್ತು. ಆದರೆ ಈಗ ಪ್ರಧಾನಿ ಮೋದಿಯವರು ತಮ್ಮ ರಹಸ್ಯಗಳನ್ನು ಮುಚ್ಚಿಕೊಳ್ಳಲು ಅಮೆರಿಕ – ಇಸ್ರೇಲ್ ಪರವಾದಂತಹ ಶರಣಾಗತಿ ನೀತಿಯನ್ನು ಅನುಸರಿಸುತ್ತಿರುವುದು ದೇಶದ ಜನ ಗಮನಿಸಬೇಕಿದೆ. ಕೂಡಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉದ್ಭವಿಸಿರುವ ಅಡುಗೆ ಅನಿಲ ಪೂರೈಕೆಯನ್ನು ಸರಾಗವಾಗಿ ಮಾಡದಿದ್ದಲ್ಲಿ ಪಕ್ಷವು ಮತ್ತಷ್ಟು ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ ” ರಾಜ್ಯದಲ್ಲಿ ಎಲ್ಲೆಡೆ ಅವ್ಯಾಹತವಾಗಿ ಕಾಳಸಂತೆಯಲ್ಲಿ ದುಬಾರಿ ವೆಚ್ಚದಲ್ಲಿ ಮಾರಾಟದಂತೆಯನ್ನು ನಿಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಿಧಾನಸಭೆಯಲ್ಲಿ ಆಹಾರ ಪೂರೈಕೆ ಸಚಿವ ಮುನಿಯಪ್ಪ ಅಸಹಾಯಕರಾಗಿ ಮಾತನಾಡುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದನ್ನು ಪಕ್ಷವು ಸಹಿಸುವುದಿಲ್ಲ” ಎಂದು ಗುಡುಗಿದರು.

ಪ್ರತಿಭಟನೆಯಲ್ಲಿ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ, ಜಗದೀಶ್ ವಿ. ಸದಂ, ಲೋಹಿತ್ ಕುಮಾರ್, ಉಷಾ ಮೋಹನ್, ಪುಷ್ಪ ಕೇಶವ್, ರವಿಕುಮಾರ್ ಸೇರಿದಂತೆ ಅನೇಕ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

0 Shares

By admin

Leave a Reply

Your email address will not be published. Required fields are marked *