0 Shares

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆಯ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆ ದಾಳಿಗೆ ಕೊಡಗು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಾವುಗಳಾಗ್ತಿರೋದು ಜನರ ನಿದ್ದೆಗೆಡಿಸಿದೆ. ಕಾಫಿ ತೋಟ, ರಸ್ತೆ ಬದಿ ಎಲ್ಲೆಂದರಲ್ಲಿ ಇವುಗಳು ಜನರ ಪ್ರಾಣ ಬಲಿ ಪಡೆಯುತ್ತಿರುವ ಕಾರಣ ಜನರು ಮನೆಯಿಂದ ಹೊರ ಬರಲೂ ಹೆದರಬೇಕಾದ ಪರಿಸ್ಥಿತಿ ಬಂದೊದಗಿದೆ.

ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದರು.

ಅದಾಗಿ 10 ದಿನಗಳು ಕಳೆಯುವುದರ ಒಳಗೆಯೇ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ ಎಂಬವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸಾಲು ಸಾಲು ಸಾವುಗಳ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳ ದಾಳಿ ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.

0 Shares

By admin

Leave a Reply

Your email address will not be published. Required fields are marked *