0 Shares

ಬೆಂಗಳೂರು : ಹಲವು ತಿಂಗಳುಗಳಿಂದ ಒಂದಲ್ಲಾ ಒಂದು ರೀತಿಯ ಅಕ್ರಮಗಳಿಂದ ಸುದ್ದಿಯಾಗುತ್ತಿರುವ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಗಾಂಜಾ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದ್ದು, ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ.

ಮಾರ್ಚ್ 9 ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ–2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳಉಡುಪಿನಲ್ಲಿ ಹಣ ಮತ್ತು ಕಪ್ಪು ಟೇಪ್‌ನಿಂದ ಸುತ್ತಿದ ಒಂದು ಪೊಟ್ಟಣ ಪತ್ತೆಯಾಯಿತು. ಅನುಮಾನಗೊಂಡ ಸಿಬ್ಬಂದಿ ಅದನ್ನು ತೆರಳಿ ಪರಿಶೀಲಿಸಿದಾಗ ಅದರೊಳಗೆ ಗಾಂಜಾ ಇರುವುದನ್ನು ಕಂಡುಬಂದಿದೆ.

ಪ್ರಕಾಶ್ ಗಾವಡೆ ಕೆಎಸ್‌ಐಎಸ್‌ಎಫ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಗಾಂಜಾ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಅವನನ್ನು ವಶಕ್ಕೆ ಪಡೆದ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈ ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬನು ಪ್ರಕಾಶ್‌ಗೆ ಕರೆ ಮಾಡಿ ಗಾಂಜಾ ತಂದುಕೊಡಲು ಸೂಚಿಸಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಹೊರಗಿನಿಂದ ಗಾಂಜಾ ತಂದು ಜೈಲಿನೊಳಗೆ ತಲುಪಿಸಿದರೆ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಆ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಿಂಚಿನ ಸಂಚಾರ ನಡೆಸಿದ್ದ ಡಿಜಿಪಿ, ಅಡುಗೆ ಮನೆ, ಆಸ್ಪತ್ರೆಗೂ ವಿಸಿಟ್ ಮಾಡಿದ್ದರು. ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ನೇರವಾಗಿ ಹೇಳಿದ್ದರು. ಅಡುಗೆ ಮನೆಯ ಸಿಬ್ಬಂದಿಗೂ ಎಚ್ಚರಿಸಿದ್ದ, ಎಡಿಷನಲ್​​ ಆ್ಯಕ್ಟಿವಿಟಿಗಳು ಬಂದ್​​ ಆಗಬೇಕು ಎಂದಿದ್ದರು. ಜೈಲಿನ ಬೇಕರಿಗೂ ಡಿಜಿಪಿ ಭೇಟಿ ನೀಡಿದ್ದು, ಯೀಸ್ಟ್ನಿಂದ ವೈನ್ ತಯಾರಿಸಿದ್ರೆ ವೈಲೆಂಟ್ ಆಗಬೇಕಾಗುತ್ತೆ ಎಂದು ಎಚ್ಚರಿಸಿದ್ದರು. ಇವೆಲ್ಲದರ ನಡುವೆ ಮತ್ತೊಮ್ಮೆ ಇಂತಹ ಅಕ್ರಮಗಳು ಜೈಲಿನಲ್ಲಿ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ.

0 Shares

By admin

Leave a Reply

Your email address will not be published. Required fields are marked *