ಬೆಂಗಳೂರು : ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳನೊಬ್ಬ ಮಟಮಟ ಮಧ್ಯಾಹ್ನವೇ ಹೊತ್ತೊಯ್ದಿರುವ ಘಟನೆ ಬೆಂಗಳೂರಿನ ಲಕ್ಕಸಂದ್ರದಲ್ಲಿ ನಡೆದಿದೆ. ವಾಹನದ ಮಾಲೀಕರು ಮಾಡಿದ ಒಂದು ಸಣ್ಣ ನಿರ್ಲಕ್ಷ್ಯ ಕಳ್ಳನಿಗೆ ಕೆಲಸವನ್ನು ಸುಲಭವಾಗಿಸಿದ್ದು, ಬೈಕ್ ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಲಕ್ಕಸಂದ್ರದ 16ನೇ ಕ್ರಾಸ್ ಬಳಿ ಏಪ್ರಿಲ್ 9 ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿವಾಸಿಯೊಬ್ಬರು ತಮ್ಮ ಸುಜುಕಿ ಆಕ್ಸೆಸ್ 125 ಬೈಕ್ ಅನ್ನು ಮನೆಯ ಮುಂಭಾಗ ನಿಲ್ಲಿಸಿದ್ದರು. ಆದರೆ, ಆತುರದಲ್ಲಿ ಅಥವಾ ಮರೆವಿನಿಂದಾಗಿ ಬೈಕ್‌ನ ಕೀಲಿಯನ್ನು ವಾಹನದಲ್ಲಿಯೇ ಬಿಟ್ಟು ಮನೆಗೆ ತೆರಳಿದ್ದರು.
ಹ್ಯಾಂಡಲ್ ಲಾಕ್ ಕೂಡ ಮಾಡದೆ ಬೈಕ್ ಮೇಲೆಯೇ ಕೀ ಇರುವುದನ್ನು ಗಮನಿಸಿದ ಕಳ್ಳ, ಅಕ್ಕಪಕ್ಕದಲ್ಲಿ ಯಾರೂ ಇಲ್ಲದ ಸಮಯ ನೋಡಿ ನಿರಾಯಾಸವಾಗಿ ಬೈಕ್ ಸ್ಟಾರ್ಟ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬೈಕ್ ನಿಲ್ಲಿಸಿದ ಜಾಗದಲ್ಲಿ ಕಾಣದಿದ್ದಾಗ ಆತಂಕಕ್ಕೊಳಗಾದ ಮಾಲೀಕರು ಕೂಡಲೇ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಏರಿ ಬಹಳ ಸಲೀಸಾಗಿ ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವಾಹನದ ಕೀ ಬೈಕ್‌ನಲ್ಲಿಯೇ ಇದ್ದ ಕಾರಣ ಕಳ್ಳನಿಗೆ ಲಾಕ್ ಮುರಿಯುವ ಅಥವಾ ಹೆಚ್ಚಿನ ಕಷ್ಟಪಡುವ ಕೆಲಸವಿಲ್ಲದಂತಾಗಿದೆ.
ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳ್ಳನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
