0 Shares

ಬೆಂಗಳೂರು : ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆ ಮೂಡಿಸುವಂತಹ ಘಟನೆಯೊಂದು ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಹಜರತ್ ನಿಜಾಮುದ್ದೀನ್ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಈ ರೈಲಿನಲ್ಲಿ ಇಬ್ಬರು ಯುವಕರು ಬಹಿರಂಗವಾಗಿ ಗಾಂಜಾ ಸೇವನೆ ಮಾಡುವ ಮೂಲಕ ಸಹಪ್ರಯಾಣಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ರೈಲು ಸಂಖ್ಯೆ 12650ರಲ್ಲಿ ರಾತ್ರಿ ವೇಳೆ ಪ್ರಯಾಣಿಕರೆಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾಗ, ಈ ಯುವಕರಿಬ್ಬರು ಸಿಗರೇಟ್‌ನಲ್ಲಿ ಗಾಂಜಾ ತುಂಬಿಸಿ ಸೇದಲು ಶುರು ಮಾಡಿದ್ದಾರೆ. ಗಾಂಜಾದ ತೀವ್ರವಾದ ವಾಸನೆ ಇಡೀ ಬೋಗಿಗೆ ಹರಡಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಹಪ್ರಯಾಣಿಕರು ಉಸಿರಾಡಲು ಕಷ್ಟಪಡುವಂತಾಯಿತು. ಸಾರ್ವಜನಿಕ ಸ್ಥಳ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ, ಕಾನೂನಿನ ಭಯವಿಲ್ಲದೆ ಮಾದಕ ದ್ರವ್ಯ ಸೇವಿಸುತ್ತಾ ಈ ಯುವಕರು ಅಟ್ಟಹಾಸ ಮೆರೆದಿದ್ದಾರೆ..

ಯುವಕರ ಈ ಬೇಜವಾಬ್ದಾರಿತನ ಮತ್ತು ಕಿರಿಕಿರಿಯಿಂದ ಬೇಸತ್ತ ಪ್ರಯಾಣಿಕರು, ಅವರ ಕೃತ್ಯವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಘಟನೆಯಿಂದ ರೈಲ್ವೆ ಇಲಾಖೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈಲಿನೊಳಗೆ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಸಿಬ್ಬಂದಿಗಳ ಗಮನಕ್ಕೆ ಬಾರದಿರುವುದು ಚರ್ಚೆಗೆ ಗ್ರಾಸವಾಗಿದೆ.

ವೈರಲ್ ವಿಡಿಯೋ ಆಧರಿಸಿ ರೈಲ್ವೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಮತ್ತು ಈ ಯುವಕರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ರೈಲುಗಳಲ್ಲಿ ಇಂತಹ ಮಾದಕ ದ್ರವ್ಯ ಸೇವನೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

0 Shares

By admin

Leave a Reply

Your email address will not be published. Required fields are marked *