ಗುವಾಹಟಿ : ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 4ನೇ ಗೆಲುವು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜತೆಗೆ ತಂಡ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ರವಿ ಬಿಷ್ಣೋಯ್ ಕ್ರಮವಾಗಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ರಾಜಸ್ಥಾನ್ ಆಡಿದ ಎಲ್ಲ 4 ಪಂದ್ಯಗಳನ್ನು ಗೆದ್ದು 8 ಅಂಕದೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಪಂಜಾಬ್ ಕಿಂಗ್ಸ್ 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಅವರು 3 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದ್ದಾರೆ. ರಾಜಸ್ಥಾನ್‌ಗೆ ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯ ಗೆದ್ದರೂ ಪ್ಲೇ ಆಫ್‌ಗೆ ಪ್ರವೇಶಿಸಬಹುದು.
ರಾಜಸ್ಥಾನ್ ರಾಯಲ್ಸ್ ತಂಡದ 202 ರನ್ ಗಳ ಗುರಿ ಬೆನ್ನಟ್ಟುವಿಕೆಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 78 ರನ್ ಗಳಿಸಿ ಸ್ಮರಣೀಯ ಅರ್ಶತಶತಕ ಬಾರಿಸಿದರು. ಅವರ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನವು ಐಪಿಎಲ್ 2026 ಆರೆಂಜ್ ಕ್ಯಾಪ್ ಪಡೆಯಲು ನೆರವಾಯಿತು. ಸೂರ್ಯವಂಶಿ ನಾಲ್ಕು ಪಂದ್ಯಗಳಲ್ಲಿ 200 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರೆ, ಯಶಸ್ವಿ ಜೈಸ್ವಾಲ್ 183 ರನ್‌ಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ ಮತ್ತು ಧ್ರುವ್ ಜುರೆಲ್ 176 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ನೆನ್ನೆ (ಶುಕ್ರವಾರ) ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಸ್ಪಿನ್ನರ್ ರವಿ ಬಿಷ್ಣೋಯ್ ನಾಲ್ಕು ಓವರ್‌ಗಳಲ್ಲಿ 32 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದರು. ಐಪಿಎಲ್ 2026 ರ ನಾಲ್ಕು ಪಂದ್ಯಗಳಲ್ಲಿ ಅವರು ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು 9 ಕ್ಕೆ ವಿಸ್ತರಿಸಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುನ್ನಡೆಯಲ್ಲಿದ್ದಾರೆ. ಪ್ರಸಿದ್ಧ್ ಕೃಷ್ಣ(6) ಮತ್ತು ರಶೀದ್ ಖಾನ್ (5) ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇಂದು (ಶನಿವಾರ) ಮಧ್ಯಾಹ್ನದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಲ್ಲನ್‌ಪುರದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸಂಜೆ 07:30 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
