0 Shares

ಬೆಂಗಳೂರು : ಕರ್ನಾಟಕ ಉಪ ಚುನಾವಣೆ ಮುಕ್ತಾಯ ಬೆನ್ನಲ್ಲೆ ಸಂಪುಟ ಪುನಾರಚನೆಯ ಚರ್ಚೆಗಳು ಗರಿಗೆದರಿವೆ. ಸದ್ಯ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ನ ಸುಮಾರು 25 ರಿಂದ 30 ಹಿರಿಯ ಶಾಸಕರ ದಂಡು ಭಾನುವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗೆ ತೆರಳುವ ಮುನ್ನವೇ ಈ ಶಾಸಕರ ಗುಂಪು ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕನಿಷ್ಠ ಮೂರಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಹಾಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಈ ಹಿರಿಯ ಶಾಸಕರು, ಮೂರ್ನಾಲ್ಕು ದಿನಗಳ ಕಾಲ ದೆಹಲಿಯಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಮಂಡಿಸಲಿರುವ ಶಾಸಕರು, ರಾಹುಲ್ ಗಾಂಧಿ ಅವರ ಭೇಟಿಗೂ ಸಮಯಾವಕಾಶ ಕೇಳಿದ್ದಾರೆ.

ಮಂಗಳವಾರ (ಏಪ್ರಿಲ್ 14 ರಂದು) ತಮ್ಮ-ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಭಾಗವಹಿಸಬೇಕಿರುವ ಹಿನ್ನೆಲೆಯಲ್ಲಿ, ಸೋಮವಾರ ಸಂಜೆಯೇ ಈ ತಂಡ ರಾಜ್ಯಕ್ಕೆ ಮರಳುವ ಲೆಕ್ಕಾಚಾರದಲ್ಲಿದೆ. ಸೋಮವಾರ ಬೆಳಗಿನ ಜಾವವೂ ಮತ್ತಷ್ಟು ಶಾಸಕರು ದೆಹಲಿಗೆ ತೆರಳಿ ಈ ಗುಂಪನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಹಿರಿಯ ಶಾಸಕ ಟಿಬಿ ಜಯಚಂದ್ರ, “ಸಂಪುಟ ಪುನಾರಚನೆ ಮಾಡುವಂತೆ ಹೈಕಮಾಂಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. 2028ರ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳಿದ್ದು, ಆ ಹೊತ್ತಿಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ತಡೆಯಲು ಇತರರಿಗೂ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೆ ತರಲಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ದೆಹಲಿಗೆ ತೆರಳಿದ ಪ್ರಮುಖ ಶಾಸಕರು ಯಾರು? – ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ್, ಎಸ್.ಎನ್. ಸುಬ್ಬಾರೆಡ್ಡಿ, ಸಿ. ಪುಟ್ಟರಂಗಶೆಟ್ಟಿ, ಹಂಪನಗೌಡ ಬಾದರ್ಲಿ, ಡಿ.ಜಿ. ಶಾಂತನಗೌಡ, ಬಸವರಾಜ್ ಶಿವಣ್ಣನವರ್, ಎ.ಆರ್. ಕೃಷ್ಣಮೂರ್ತಿ, ಪ್ರಸಾದ್ ಅಬ್ಬಯ್ಯ, ಯು.ಬಿ. ಬಣಕರ್, ಜಿ.ಎಸ್. ಪಾಟೀಲ್, ಯಶವಂತರಾಯಗೌಡ ಪಾಟೀಲ್, ಕೆ. ಷಡಕ್ಷರಿ, ಎಸ್.ಎನ್. ನಾರಾಯಣಸ್ವಾಮಿ, ಲಕ್ಷ್ಮಣ ಸವದಿ, ಅಪ್ಪಾಜಿ ನಾಡಗೌಡ, ಪ್ರಿಯಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಬಿ. ಶಿವಣ್ಣ, ರಾಘವೇಂದ್ರ ಹಿಟ್ನಾಳ್, ಬೇಳೂರು ಗೋಪಾಲಕೃಷ್ಣ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

0 Shares

By admin

Leave a Reply

Your email address will not be published. Required fields are marked *