0 Shares

ಬೆಂಗಳೂರು : ಕೋಮುವಾದದ ಕಾರಣ ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ಖಡಕ್​​ ಕೌಂಟರ್​​ ಕೊಟ್ಟಿದೆ. ಕರಾವಳಿ ಬಗ್ಗೆ ಮಾತನಾಡುವ ಮುನ್ನ, ಕಲಬುರಗಿಯಲ್ಲಿ ಯಾಕೆ ಐಟಿ-ಬಿಟಿ ಕಂಪನಿಗಳು ಕಾಲಿಟ್ಟಿಲ್ಲ ಎನ್ನುವುದರ ಕಡೆಗೆ ಗಮನ ಹರಿಸಿ ಎಂದು ಸಚಿವರಿಗೆ ತಿವಿದಿದೆ.

ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಿಯಾಂಕ್​​, ಐಟಿ-ಬಿಟಿ ಕಂಪನಿಗಳಿಗೆ ಹೂಡಿಕೆ ಮಾಡಿ ಎಂದು ಹೇಳುತ್ತೇವೆ. ಆದರೆ ತಮ್ಮ ಕೆಲಸಗಾರರಿಗೆ ತೊಂದರೆ ಆದರೆ ಏನು ಕತೆ ಎಂಬ ಚಿಂತೆ ಅವರಿಗಿದೆ. ಎಲ್ಲಿಯವರೆಗೆ ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗಿ ಮಾತನಾಡಲ್ವೋ ಅಲ್ಲಿಯವರೆಗೂ ಸಮಾಜ ಉದ್ಧಾರ ಆಗಲ್ಲ. ಧರ್ಮದ ನಶೆ ಸೃಷ್ಟಿಸುವ ಕೆಲಸ ಮೊದಲು ನಿಲ್ಲಬೇಕು ಎಂದಿದ್ದರು. ಈ ವಿಚಾರವೀಗ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಕಿಡಿ ಕಾರಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕರಾವಳಿಯ ಮಣ್ಣಿನ ಗುಣ ಮತ್ತು ಅಲ್ಲಿನ ಜನರ ಉದ್ಯಮಶೀಲತೆಯನ್ನು, ಪ್ರಗತಿಯನ್ನು, ತಮ್ಮ ಕೀಳು ರಾಜಕೀಯದ ಕಾಮಾಲೆ ಕಣ್ಣಿನಿಂದ ನೋಡದೆ ವಾಸ್ತವ ನೆಲೆಗಟ್ಟಿನಲ್ಲಿ ಸಚಿವರು ನೋಡಲಿ. ಕರಾವಳಿಗೆ ಕೋಮುವಾದದ ಹಣೆಪಟ್ಟಿ ಹಚ್ಚುವ ಅವರ ವ್ಯರ್ಥ ಪ್ರಯತ್ನ ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ಕರಾವಳಿ ಕರ್ನಾಟಕ ತನ್ನ ಸ್ವಂತ ಶಕ್ತಿಯಿಂದ, IT-BT ಸೇರಿದಂತೆ ಶಿಕ್ಷಣ, ಬ್ಯಾಂಕಿಂಗ್ ಮತ್ತು ಉದ್ಯಮ ರಂಗದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ.

ಅಂತಹ ನಮ್ಮ ಹೆಮ್ಮೆಯ ಕರಾವಳಿ ಜಿಲ್ಲೆಗಳ ಕುರಿತು ಅನಗತ್ಯವಾಗಿ ಬಂಡವಾಳ ಹೂಡಿಕೆದಾರರನ್ನು ಹೆದರಿಸುವ ಕೆಲಸವನ್ನು ಸ್ವತಃ ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವರೇ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ರಾಜ್ಯದ ಹಿತ ಕಾಯಬೇಕಾದ ಸಚಿವರು, ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸುವ ಮೂಲಕ ಕರಾವಳಿಯ ಆರ್ಥಿಕತೆಗೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿರುವುದು ಕರಾವಳಿಯ ಜನರಿಗೆ ಮಾಡುತ್ತಿರುವ ಅವಮಾನವಷ್ಟೇ ಅಲ್ಲ, ತಮ್ಮ ಭ್ರಷ್ಟ ಕಾಂಗ್ರೆಸ್​​ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಂಸ್ಕೃತಿಯ ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ನಿಮ್ಮ ಘನ ಸರ್ಕಾರಕ್ಕೆ ಸಲ್ಲಿಕೆಯಾದ ಡಾ. ಗೋವಿಂದರಾವ್ ಸಮಿತಿ ವರದಿಯೇ ನಿಮ್ಮ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ‘ಅತೀ ಹಿಂದುಳಿದ’ ಪಟ್ಟಿಯಲ್ಲಿದ್ದರೆ, ಕರಾವಳಿಯು ತನ್ನ ಸ್ವಂತ ಶಕ್ತಿಯಿಂದ ಅಭಿವೃದ್ಧಿ ಹೊಂದಿದ ವಲಯವಾಗಿ ಗುರುತಿಸಿಕೊಂಡಿದೆ. ನಿಮ್ಮ ತವರು ಜಿಲ್ಲೆಯ ಯುವಕ ಯುವತಿಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲು ವಿಫಲವಾಗಿರುವ ನೀವು, ಕರಾವಳಿಯ ಜನರ ಉದ್ಯಮಶೀಲತೆಯನ್ನು ಅವಮಾನಿಸುವುದು ನಿಮ್ಮ ರಾಜಕೀಯ ಅಸಮರ್ಥತೆಯನ್ನು, ಅಸಹಾಯಕತೆಯನ್ನು ಮತ್ತು ದುರಂತ ವೈಫಲ್ಯವನ್ನು ತೋರಿಸುತ್ತದೆ.

ಮೊದಲು ನಿಮ್ಮ ಭಾಗದ ಅಭಿವೃದ್ಧಿಯತ್ತ ತುರ್ತು ಗಮನಹರಿಸಿ, ನಂತರ ಕರಾವಳಿಯ ಬಗ್ಗೆ ಮಾತನಾಡಿ. ಕರಾವಳಿಯ ಶಕ್ತಿ ಅಲ್ಲಿನ ಧರ್ಮ ಮತ್ತು ಕರ್ಮದ ಸಮನ್ವಯತೆ. ಸುಮ್ಮನೆ ಅದನ್ನು ಕೆಣಕುವ ಬದಲು, ನಿಮ್ಮ ಆಡಳಿತದ ಅಸಮರ್ಥತೆಯಿಂದ ರಾಜ್ಯದಿಂದ ಹೊರಹೋಗುತ್ತಿರುವ ಕಂಪನಿಗಳನ್ನು ಉಳಿಸಿಕೊಳ್ಳುವತ್ತ ಗಮನಹರಿಸಿ ಎಂದು ಕೌಂಟರ್​​ ಕೊಟ್ಟಿದ್ದಾರೆ.

0 Shares

By admin

Leave a Reply

Your email address will not be published. Required fields are marked *