ಬಳ್ಳಾರಿ : ಸಂಡೂರಿನಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಜಾಲವನ್ನು ಬಯಲಿಗೆಳೆದ ಅರಣ್ಯ ಇಲಾಖೆ, ಇಬ್ಬರು ಆರೋಪಿಗಳನ್ನು ಬಂಧಿಸಿ 110 ಕೆಜಿ ಶ್ರೀಗಂಧ ತುಂಡುಗಳನ್ನು ವಶಕ್ಕೆ ಪಡೆದಿದೆ.
ಸಂಡೂರು ಉತ್ತರ ಹಾಗೂ ದಕ್ಷಿಣ ಅರಣ್ಯಾಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆಸಲಾಗಿದ್ದು, ಬಂಧಿತರನ್ನು ಸಂಡೂರಿನ ಸುಶೀಲನಗರದ ಲೋಕೇಶ್ ನಾಯ್ಕ್ ಹಾಗೂ ಕಿರಣ್ ಕುಮಾರ್ ಹೆಚ್.ಕೆ ಎಂದು ಗುರುತಿಸಲಾಗಿದೆ. ಸಾಗಾಣಿಕೆಗೆ ಬಳಸಿದ್ದ ಮಹೇಂದ್ರ ಮೊರಾಜೊ ವಾಹನವನ್ನು ಜಪ್ತಿ ಮಾಡಲಾಗಿದೆ.
ಆಂಧ್ರಪ್ರದೇಶದಲ್ಲೂ ದಾಳಿ – ತನಿಖೆಯ ಬೆನ್ನಲ್ಲೇ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ರೋಲ್ಲ ಗ್ರಾಮದಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು, ಮೆ. ನಿಷತ್ ಫ್ರೆಗ್ರೆನ್ಸ್ ಫ್ಯಾಕ್ಟರಿಯಿಂದ ಒಟ್ಟು 179 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಈ ಸರಕನ್ನು ಆಂಧ್ರದ ಪೆನುಕೊಂಡ ಅರಣ್ಯಾಧಿಕಾರಿ (ಎಫ್ಆರ್ಒ) ಅವರಿಗೆ ಹಸ್ತಾಂತರಿಸಲಾಗಿದೆ.
ಮೂರು ದಿನಗಳ ಸತತ ಕಾರ್ಯಾಚರಣೆ – ಮೂರು ದಿನಗಳ ಸತತ ಕಾರ್ಯಾಚರಣೆಯಲ್ಲಿ ಇದುವರೆಗೆ ಏಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಕಾರ್ಯಾಚರಣೆ ಬಳ್ಳಾರಿ ವಿಭಾಗ ಅರಣ್ಯ ಇಲಾಖೆಯಡಿ, ಡಿಸಿಎಫ್ ಡಾ. ಕೆ.ಎನ್. ಬಸವರಾಜ್ ಹಾಗೂ ಎಸಿಎಫ್ ಶರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಸಂಡೂರು ಉತ್ತರ ಆರ್ಎಫ್ಒ ಮಂಜುನಾಥ್ ಹಾಗೂ ದಕ್ಷಿಣ ಆರ್ಎಫ್ಒ ಸೈಯದ್ ದಾದಾ ಖಲಂದರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅರಣ್ಯ ಇಲಾಖೆಯ ದಿಟ್ಟ ಕ್ರಮದಿಂದ ಅಕ್ರಮ ಶ್ರೀಗಂಧ ಜಾಲಕ್ಕೆ ದೊಡ್ಡ ಹೊಡೆತ ಬಿದ್ದಿದೆ.
