0 Shares

ಬೆಂಗಳೂರು : ಕಸ ವಿಲೇವಾರಿಗೆ ವಿರೋಧ ಮಾಡುವ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಕಸವನ್ನೇ ತೆಗೆಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಠಿಣ ಎಚ್ಚರಿಕೆ ನೀಡಿದರು.

ಅಸ್ಸಾಂ ರಾಜ್ಯಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಕಸ ವಿಲೇವಾರಿಗೆ ಬಿಡಬೇಡಿ ಎನ್ನುವುದಾದರೆ, ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಇದನ್ನು ಮೈಕ್ ಹಾಕಿಯೇ ಪ್ರಚಾರ ಮಾಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸ ವಿಲೇವಾರಿಯ ಕುರಿತು ಮಾತನಾಡಿದ ಅವರು, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ. ಇದು ಜನರ ಕಸ. ಮೊದಲಿನಿಂದಲೂ ಇದ್ದ ಸಂಪ್ರದಾಯದಂತೆ ನಾವು ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಆಡಳಿತದಲ್ಲಿದ್ದಾಗಲೂ ಇದೇ ತೀರ್ಮಾನವಾಗಿತ್ತು. ಅಭಿವೃದ್ಧಿಗೆ ನಾವು ಸಾವಿರಾರು ಕೋಟಿ ರೂಪಾಯಿ ಹಣ ಕೊಟ್ಟಿದ್ದೇವೆ. 20, 30 ಕೋಟಿ ಮಾತ್ರವಲ್ಲ, 50ರಿಂದ 100 ಕೋಟಿ ರೂಪಾಯಿವರೆಗೆ ಅನುದಾನ ನೀಡಿದ್ದೇವೆ. ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವು ಸಹ ಅಲ್ಲಿನ ಕಸವನ್ನು ಮೂರು ದಿನ ತೆಗೆಯಬೇಡಿ ಎಂದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಕಸ ವಿಲೇವಾರಿಗೆ ನಾಲ್ಕು ಕಡೆ ಜಮೀನನ್ನು ಗುರುತಿಸಲಾಗಿತ್ತು. ಭೂಮಿ ಸಮಸ್ಯೆ ಕಾರಣಕ್ಕೆ ಎರಡು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ನೌಕರರ ಹಿಂಬಾಕಿ ಕುರಿತು – ಸಾರಿಗೆ ನೌಕರರ ಬೇಡಿಕೆಯಿಗಿಂತ ಕಡಿಮೆ ಹಿಂಬಾಕಿ ನೀಡಿರುವ ಕುರಿತು ಕೇಳಿದಾಗ, ಸದ್ಯ ಸರ್ಕಾರ ನೀಡಿರುವಷ್ಟು ಹಿಂಬಾಕಿಗೆ ಸಂತೋಷ ಪಡಬೇಕು. ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಸಾರಿಗೆ ನೌಕರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಸ್ಸಾಂ ಚುನಾವಣಾ ಪ್ರಚಾರ – ಅಸ್ಸಾಂ ಚುನಾವಣಾ ಪ್ರಚಾರಕ್ಕಾಗಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಅಸ್ಸಾಂಗೆ ತೆರಳುತ್ತಿದ್ದೇನೆ. ನನ್ನ ಜೊತೆಗೆ ಭೂಪೇಶ್ ಬಘೇಲ ಹಾಗೂ ನಮ್ಮ ತಂಡ ಇರಲಿದೆ. ಅಸ್ಸಾಂ ಚುನಾವಣೆ ಕುರಿತು ದೆಹಲಿಯಲ್ಲಿ ಈಗಾಗಲೇ ಮೂರುರಿಂದ ನಾಲ್ಕು ಸಭೆಗಳನ್ನು ನಡೆಸಿದ್ದೇವೆ. ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ತಂತ್ರಗಾರಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ ಬದಲಾವಣೆ ಆಗಲಿದೆ ಎಂಬ ಭರವಸೆ ಇದೆ. ಅಸ್ಸಾಂ ಪ್ರವಾಸದ ವೇಳೆ ಕಾಮಾಕ್ಯ ದೇವಿ ದೇವಾಲಯಕ್ಕೂ ಭೇಟಿ ನೀಡಲಿದ್ದು, ಇದು ಎರಡು ದಿನಗಳ ಪ್ರವಾಸವಾಗಿರುತ್ತದೆ ಎಂದು ತಿಳಿಸಿದರು.

0 Shares

By admin

Leave a Reply

Your email address will not be published. Required fields are marked *