ಮಂಡ್ಯ : ಹೈಕಮಾಂಡ್ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ ಪಕ್ಷಕ್ಕೂ ಸರ್ಕಾರಕ್ಕೂ ಹಾನಿಯಾಗಲಿದೆ ಎಂದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಬೂದನೂರಿನಲ್ಲಿ ಮಾತನಾಡಿದ ಅವರು, “ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀವಿ ಅಥವಾ ಮಾಡಲ್ಲ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಇದು ಪಕ್ಷಕ್ಕೂ ಸರ್ಕಾರಕ್ಕೂ ಡ್ಯಾಮೇಜ್ ಆಗುತ್ತದೆ” ಎಂದು ಹೇಳಿದರು.
ಫಾರಿನ್ ಟ್ರಿಪ್ ವಿಚಾರಕ್ಕೆ ತೀವ್ರ ಟೀಕೆ – ಸಿದ್ದರಾಮಯ್ಯ ಅವರ ಆಪ್ತ ಶಾಸಕರ ವಿದೇಶಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಅವರು, “ಏನಕ್ಕಾಗಿ ಫಾರಿನ್ ಟ್ರಿಪ್ ಹೋಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಸ್ಪಾನ್ಸರ್ ಇರಲಿ, ಅವರೇ ದುಡ್ಡು ಹಾಕಿರಲಿ, ಕದ್ದು ಹೋಗಿರಲಿ ಅಥವಾ ಧೈರ್ಯದಿಂದ ಹೋಗಿರಲಿ—ಇದರಿಂದ ಗೊಂದಲ ಹೆಚ್ಚುತ್ತಿದೆ” ಎಂದು ಹೇಳಿದರು.
ಸರ್ಕಾರ ಬದಲಾವಣೆ ಸಾಧ್ಯವಿಲ್ಲ – “ಯಾವ ಮುಖ್ಯಮಂತ್ರಿಯನ್ನೂ ಇಳಿಸೋಕೆ ಆಗಲ್ಲ, ಸರ್ಕಾರ ಬದಲಾವಣೆ ಆಗಲ್ಲ. ನಾನು 50 ಶಾಸಕರನ್ನು ಫಾರಿನ್ ಕರೆದುಕೊಂಡು ಹೋದರೂ ಸಿಎಂ ಬದಲಾಯಿಸಲು ಆಗಲ್ಲ. ಮಂಡ್ಯದಲ್ಲಿ ಕೂತಿದ್ದರೂ ಆಗಲ್ಲ. ಹೈಕಮಾಂಡ್, ಸಿದ್ದರಾಮಯ್ಯ ಮತ್ತು ಡಿಕೆ ಸಾಹೇಬ್ರು ನಡುವೆ ಆಗಿರುವ ಮಾತುಕತೆಯೇ ನಿರ್ಣಾಯಕ” ಎಂದು ಹೇಳಿದರು.
ಹೈಕಮಾಂಡ್ ಮಧ್ಯಪ್ರವೇಶಕ್ಕೆ ಆಗ್ರಹ – “ಈ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಪುಲ್‌ಸ್ಟಾಪ್ ಹಾಕಬೇಕು. ಇಲ್ಲದಿದ್ದರೆ ಇದು ಕಡಿಮೆಯಾಗುವುದಿಲ್ಲ, ಇನ್ನೂ ಜಾಸ್ತಿಯಾಗುತ್ತದೆ. ಇದರಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗುತ್ತದೆ. ಟೈಂ ಪಾಸ್ ರೀತಿ ನಡೆಸಿಕೊಂಡರೆ ಆಗಲ್ಲ” ಎಂದು ಎಚ್ಚರಿಸಿದರು.
“ದಿನಕ್ಕೊಬ್ಬರು ಹೇಳಿಕೆ ಕೊಡುವುದರಿಂದ ಪಕ್ಷಕ್ಕೂ ಸರ್ಕಾರಕ್ಕೂ ಹಾನಿಯಾಗುತ್ತಿದೆ. ಕೂಡಲೇ ಹೈಕಮಾಂಡ್ ನಿರ್ಧಾರ ಮಾಡಿ, ಡಿಕೆಶಿಯನ್ನು ಸಿಎಂ ಮಾಡ್ತೀವಿ ಅಥವಾ ಇಲ್ಲ ಎಂದು ತಿಳಿಸಲಿ. ಇಲ್ಲದಿದ್ದರೆ ದಿನೇ ದಿನೇ ಫಾರಿನ್ ಟ್ರಿಪ್‌ಗಳ ಚರ್ಚೆ ನಡೆಯುತ್ತಲೇ ಇರುತ್ತದೆ” ಎಂದು ಅವರು ಹೇಳಿದರು.
