0 Shares

ಆನೇಕಲ್ : ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ದೊರಕಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕುಟುಂಬದವರಿಗೆ ಆಶ್ವಾಸನೆ ನೀಡಿದ್ದಾರೆ.

ಆನೆಕಲ್ ಬಳಿಯ ಸಕಲವಾರದಲ್ಲಿರುವ ಡಾ. ಸಮೀಕ್ಷಾ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಇದೊಂದು ಅತ್ಯಂತ ನೋವಿನ ಸಂಗತಿ. ಸರ್ಕಾರ ಈ ನೋವಿನ ಸಂದರ್ಭದಲ್ಲಿ ಕುಟುಂಬದೊಂದಿಗೆ ನಿಲ್ಲುತ್ತದೆ ಎಂದರು.

ವನ್ಯಜೀವಿ ಚಿಕಿತ್ಸೆ ವೇಳೆ ಹುತಾತ್ಮರಾದ ಯುವವೈದ್ಯೆಯ ಹೆಸರಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಅವರ ತಂದೆ ಧ್ರುವಕುಮಾರ್ ಮತ್ತು ತಾಯಿ ಶೈಲಜಾ ರೆಡ್ಡಿ ಅವರ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

ಮೃಗಾಲಯದಲ್ಲಿ ವನ್ಯಜೀವಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಿಖಿತ ಪ್ರಮಾಣಿತ ಮಾನದಂಡ ಇಲ್ಲ. ಈ ನಿಟ್ಟಿನಲ್ಲಿ ಮಹಿಳಾ ಪಶುವೈದ್ಯರಿಗೆ ಹಾಗೂ ವೈದ್ಯರಿಗೆ ಸುರಕ್ಷತೆ ಕಲ್ಪಿಸುವುದೂ ಸೇರಿದಂತೆ ಕೂಡಲೇ ಸೂಕ್ತ ಎಸ್.ಓ.ಪಿ. ರೂಪಿಸುವಂತೆ ಹಾಗೂ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ತಾವು ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.

ಈ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇತ್ತು. ಅವರು ಚಿರತೆಯೊಂದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಿದ್ದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರ ಸಾವಿನಿಂದ ರಾಜ್ಯ ಒಬ್ಬ ಯುವ ಪಶುವೈದ್ಯಯನ್ನು ಕಳೆದುಕೊಂಡಿದೆ ಎಂದರು.

ಮಗಳ ನೋವಿನ ನಡುವೆಯೂ ಕುಟುಂಬದ ಸದಸ್ಯರು ಸಾಮಾಜಿಕ ಕಾಳಜಿ ತೋರಿದ್ದಾರೆ. ಹಲವು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಶುವೈದ್ಯರು ಕೂಡ ತಮ್ಮನ್ನು ಭೇಟಿ ಮಾಡಿ ಪಶುವೈದ್ಯರ ಸಮಸ್ಯೆಗಳನ್ನೂ ತಿಳಿಸಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.

ತಮಗೆ ಈ ಘಟನೆಯ ಬಗ್ಗೆ ತಿಳಿದ ಕೂಡಲೇ ಹಿರಿಯ ಅಧಿಕಾರಿಗಳ ಸಭೆ ಕರೆದು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದೇನೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಮಗೆ ಪರಿಹಾರ ನೀಡುವುದು ಬೇಡ, ಪರಿಹಾರದ ಹಣದಲ್ಲಿ ಡಾ. ಸಮೀಕ್ಷಾ ರೆಡ್ಡಿ ಅವರ ಹೆಸರಲ್ಲಿ ಸ್ಮಾರಕ ಮಾಡಲು ಕೋರಿದ್ದಾರೆ. ಆನೆಗೆ ಅವರ ಹೆಸರಿಡಬೇಕು ಎಂಬ ಸಲಹೆ ಬಂದಿದೆ. ಎಲ್ಲ ವಿಚಾರಗಳ ಬಗ್ಗೆ ಪರಿಶೀಲಿಸಲಾಗುವುದು. ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಮತ್ತಿತರರು ಪಾಲ್ಗೊಂಡಿದ್ದರು.

0 Shares

By admin

Leave a Reply

Your email address will not be published. Required fields are marked *